ನಾಗದೇವಚಾರ್ಯ
13ನೆಯ ಶತಮಾನ. ಮಹಾನುಭಾವ ಪಂಥದ ಪ್ರಾಚೀನ ಆಚಾರ್ಯರಲ್ಲಿ ಒಬ್ಬ. ಆ ಪಂಥದ ಪ್ರಾಯಃ ಆದ್ಯ ಪ್ರವರ್ತಕನಾದ ಚಕ್ರಧರನ ಶಿಷ್ಯ. ತಂದೆ ಮಹಾದೇವ ಭಟ್ಟ. ತಾಯಿ ಆಬಾಯಿ. ಹೆಂಡತಿ ಗಂಗಾಯಿ. ಮಗ ಮಹೇಶ್ವರ. ಚಕ್ರಧರನಿಂದಲೇ ಸನ್ಯಾಸವನ್ನು ಸ್ವೀಕರಿಸಿ ಅವನ ಮರಣಾ ನಂತರ ಪರಮ ಗುರುವಾದ ಋದ್ದೀಪುರದ ಗೋವಿಂದ ಪ್ರಭುವನ್ನು ಸೇವಿಸಿದ. ಸೇಉಣ ದೊರೆ ರಾಮಚಂದ್ರನ ಹೆಂಡತಿ ಕಾಮಾಯಿಗೆ ಗುರುವಾಗಿದ್ದು ಆಕೆಯಿಂದ ವಿಶೇಷ ಪ್ರೋತ್ಸಾಹ ಪಡೆದ.

	ಮಹಾನುಭಾವ ಪಂಥವನ್ನು ಸ್ವೀಕರಿಸುವುದಕ್ಕಿಂತ ಮುಂಚೆ ಈತ ತನ್ನ ಜನ್ಮಸ್ಥಳ ಬೀಡ ಜಿಲ್ಲೆಯ ಪುರಿ ಗ್ರಾಮದಲ್ಲಿ ಬಹಳ ವ್ಯಸನಗಳಿಗೆ ಸಿಕ್ಕಿಕೊಂಡು ಜೀವನದಲ್ಲಿ ನಿರಾಶಾಭಾವನೆ ಉಂಟಾದುದರಿಂದ ಮನೆ ಬಿಟ್ಟು ಹೊರಟ. ಶ್ರೀನಗರದಲ್ಲಿ (ಸಿನ್ನಾರ) ಚಕ್ರಧರನ ಭೇಟಿಯಾಯಿತು. ಅಂದಿನಿಂದ ಮಹಾನುಭಾವ ಪಂಥಕ್ಕೆ ಸೇರಿ ಅದರ ಬೆಳವಣಿಗೆಗೆ ಅತ್ಯಂತ ಆಸಕ್ತಿಯಿಂದ ದುಡಿದು ಅನೇಕ ಶಿಷ್ಯರನ್ನು ಸಂಘಟಿಸಿದ. ಮಾಹಿಮ್‍ಭಟ್ಟ, ಗೋಪಾಲ ಪಂಡಿತ, ದಾಮೋದರ ಪಂಡಿತ ಮತ್ತು ಭಾಸ್ಕರ ಭಟ್ಟ ಮುಂತಾದ ಘನ ವಿದ್ವಾಂಸರುಗಳು ಇವನ ಶಿಷ್ಯರಾದರು.

	ಮರಾಠಿಯಲ್ಲಿ ವಿಶೇಷ ಪ್ರೇಮವಿದ್ದ ಈತ ಗುರು ಚಕ್ರಧರನ ಚರಿತ್ರೆಯನ್ನು ಆ ಭಾಷೆಯಲ್ಲಿ ಬರೆದು ಅದರ ಕೀರ್ತಿಯನ್ನು ಹೆಚ್ಚಿಸಿದ. ತನ್ನ ಶಿಷ್ಯರ ಬರೆವಣಿಗೆಯಲ್ಲಿ ಗುರುವಿನ ಚರಿತೆಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಒದಗಿಸಿ ಮಹಾನುಭಾವ ಪಂಥದ ಬೆಳವಣಿಗೆಗೆ ಅತ್ಯದ್ಭುತ ಸೇವೆ ಸಲ್ಲಿಸಿದ. ಅನೇಕ ವ್ಯಸನಗಳಲ್ಲಿ ಮುಳುಗಿದ ಮನುಷ್ಯನೂ ಸ್ಥಿರಚಿತ್ತದಿಂದ ಶುದ್ಧನಾಗಬಹುದು-ಎಂಬುದು ಈತನ ಜೀವನ ತತ್ತ್ವ.

	ತನ್ನನ್ನು ಈತ ಭಟ್ಟ ಎಂದೇ ಹೇಳಿಕೊಳ್ಳುತ್ತಿದ್ದ ಕಾರಣದಿಂದ ಮಹಾನುಭಾವ ಪಂಥವನ್ನು ಪ್ರಾಯಃ ಭಟ್ಟ ಮಾರ್ಗ ಎಂದೂ ಕರೆಯಲಾಗಿದೆ.									
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ